“ಕ್ರೀಡೋತ್ಸವ ಸಮಾಜದ ಏಕತೆ ಮತ್ತು ಯುವಶಕ್ತಿಗೆ ಬಲ” – ಬ್ರಿಜೇಶ್ ಚೌಟ
ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು ಇದರ ವತಿಯಿಂದ ಆಯೋಜಿಸಲಾದ ಶತಮಾನೋತ್ಸವ ಕ್ರೀಡಾ ಕೂಟ–2026 ಜನವರಿ 4 ರಂದು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ದಿನಪೂರ್ತಿ ಉತ್ಸಾಹ, ಉಲ್ಲಾಸ ಹಾಗೂ ಸಂಭ್ರಮದಿಂದ ನೆರವೇರಿತು.
ಕ.ರಾ.ದೇವಾಡಿಗರ ಸಂಘದ ಅಧ್ಯಕ್ಷರಾದ ಅಶೋಕ್ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣದ ಮೂಲಕ ಕ್ರೀಡಾಕೂಟವು ಪ್ರಾರಂಭವಾಯಿತು. ಗೌರವ ಅತಿಥಿಯಾಗಿ ಭಾಗವಹಿಸಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಶತಮಾನೋತ್ಸವದ ಕ್ರೀಡಾಕೂಟಕ್ಕೆ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕ್ರೀಡೋತ್ಸವವು ಸಮಾಜದಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿ, ಉತ್ತಮ ದೈಹಿಕ–ಮಾನಸಿಕ ಆರೋಗ್ಯಕ್ಕೆ ಬಲವನ್ನು ನೀಡುತ್ತದೆ. ಯಾವುದೇ ಸಮುದಾಯದ ಪ್ರಾಬಲ್ಯವನ್ನು ಸಂಖ್ಯೆಯ ದೃಷ್ಟಿಯಿಂದ ಮಾತ್ರ ಅಲ್ಲ ಸಂಸ್ಕೃತಿ, ಸೌಹಾರ್ದತೆ, ಹಾಗೂ ನಾಯಕತ್ವಗಳ ಮೂಲಕ ತಮ್ಮ ಅಸ್ತಿತ್ವವನ್ನು ಪ್ರತಿನಿಧಿಸಬೇಕು; ಇದಕ್ಕೆ ದೇವಾಡಿಗ ಸಮುದಾಯ ಉತ್ತಮ ಉದಾಹರಣೆ.ಎಲ್ಲಾ ವಯೋಮಾನದ ದೇವಾಡಿಗ ಸಮಾಜ ಬಾಂಧವರ ಏಕತೆಯನ್ನು ಪ್ರದರ್ಶಿಸಲು ಕ್ರೀಡೆ ಸಹಾಯಕವಾಗಿದೆ ಎಂದು ಹೇಳಿದರು.
ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಅವರು ಮಾತನಾಡಿ, ಶತಮಾನೋತ್ಸವ ಆಚರಿಸಲಿರುವ ದೇವಾಡಿಗರ ಸಂಘದ ಶೈಕ್ಷಣಿಕ, ಸಾಮಾಜಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕರಿಸುವ ಭರವಸೆ ನೀಡಿದರು.
ಕ್ರೀಡೋತ್ಸವವನ್ನು ದೇವಾಡಿಗರ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀ ರವಿ ಎಸ್. ದೇವಾಡಿಗ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ 60ಕ್ಕಿಂತ ಹೆಚ್ಚು ಕ್ರೀಡಾಸ್ಪರ್ಧೆಗಳು ನಡೆಯುತ್ತಿರುವುದು ಶ್ಲಾಘನೀಯ ಸಾಧನೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ವೇದವ್ಯಾಸ ಡಿ. ಕಾಮತ್, 'ವಿಷನ್ ಮಂಗಳಾ'ದ ಗೌರವಾಧ್ಯಕ್ಷರಾದ ಡಾ. ದೇವರಾಜ ಕೆ., ಬಾರ್ ಕೌನ್ಸಿಲ್ ನ ಅಧ್ಯಕ್ಷರಾದ ರಾಘವೇಂದ್ರ ಹೆಚ್.ವಿ., ಕ್ಯಾಪ್ಟನ್ ವಿನಯ್ ವಿ. ದೇವಾಡಿಗ, ರತ್ನಾಕರ್ ಜಿ.ಎಸ್., ಜಯಂತ್ ದೇವಾಡಿಗ ಕಣ್ವತೀರ್ಥ, ವಿಶ್ವನಾಥ ಶೇರಿಗಾರ್, ನಾರಾಯಣ ಶೇರಿಗಾರ್ (ಉಡುಪಿ), ನಾರಾಯಣ ದೇವಾಡಿಗ, ಸುಚೇತನ ಜೆ., ಪ್ರಕಾಶ ಸಾಲಿಯಾನ್, ಸುಧೀರ್ ಎಸ್. ದೇವಾಡಿಗ ಕಣ್ವತೀರ್ಥ, ಪ್ರವೀಣ್ ಕೊಂಚಾಡಿ, ಗಣೇಶ್ ದೇವಾಡಿಗ ಉಪಸ್ಥಿತರಿದ್ದು ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು. ವಿವಿಧ ಪ್ರಾಂತ್ಯಗಳ ದೇವಾಡಿಗ ಸಂಘಗಳು ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದರು.